Tuesday, January 5, 2010

ಜಾಹೀರಾತುಗಳ ಮಾರಕ ದೃಷ್ಟಿಕೋನ

ಇಂದು ನಾವು ಜಾಹೀರಾತುಗಳನ್ನು ಎಲ್ಲಿ ನೋಡಿದರಲ್ಲಿ ಕಾಣುತ್ತಿದ್ದೇವೆ. ಜಾಹೀರಾತುಗಳು ಈ ಹಿಂದೆಯೂ ಇದ್ದವು. ಮುಂಚಿನ ಕಾಲದಲ್ಲಿ ಜಾಹೀರಾತಿನ ರೂಪ ಭಿನ್ನವಾಗಿತ್ತು. ಅಂದರೆ ರಾಜ ಮಹಾರಾಜರು ಒಂದು ವಿಷಯವನ್ನು ಜನರಿಗೆ ತಲುಪಿಸಲು ಊರು-ಊರಿಗೆ ಸೈನಿಕರನ್ನು ಕಳುಹಿಸಿ ಡಂಗುರ ಹೊಡೆಸುವುದು, ಬೀದಿ ನಾಟಕಗಳನ್ನಾಡಿಸುವುದು - ಹೀಗೆ ಬೇರೆ ಬೇರೆ ವಿಧಾನಗಳನ್ನು ಅನುಸರಿಸುತ್ತಿದ್ದರು.

ಕಾಲಕ್ರಮೇಣ ಈ ದೇಶದ ಮೇಲೆ ಆಂಗ್ಲರ ಆಕ್ರಮಣದಿಂದ ಇಂತಹ ಅನೇಕ ಪದ್ಧತಿಗಳು ಇಲ್ಲವಾದವು. ಅವುಗಳೆಲ್ಲ ಪಾಶ್ಚಿಮಾತ್ಯರ ಕೈಗೆ ಸಿಕ್ಕು ಯಾಂತ್ರಿಕತೆಯನ್ನು ಪಡೆದುಕೊಂಡವು. ಇದೇ ರೀತಿ ಮುಂದುವರೆದು ಈಗ ಬೃಹತ್ ಉದ್ಯಮವಾಗಿ ಇಂದು ಜಾಹೀರಾತುಗಳು ಬೆಳೆದು ನಿಂತಿವೆ.

ಜಾಹೀರಾತುಗಳಿಂದ ಆಗುವ ಪರಿಣಾಮಗಳನ್ನು ಒಂದೊಂದಾಗಿ ನೋಡುತ್ತ ಹೋದರೆ ಉಪಯೋಗಕ್ಕಿಂತ ಮಾರಕವಾದ ವಿಚಾರಗಳೇ ಹೆಚ್ಚು. ಅದಕ್ಕೆ ಪೂರಕವಾಗಿ ದೃಶ್ಯ ಮಾಧ್ಯಮ. ಇಂದು ನಾವು ಸಾವಿರಾರು ಚಾನೆಲ್‌ಗಳನ್ನು ದೂರದರ್ಶನದಲ್ಲಿ ನೋಡುತ್ತೇವೆ. ಎಲ್ಲ ರೀತಿಯ ಉತ್ಪನ್ನಗಳಿಗೆ ಜಾಹೀರಾತುಗಳಿವೆ. ದೂರದರ್ಶನದಲ್ಲಿ ತೋರಿಸುವ ಜಾಹೀರಾತುಗಳ ಪರಿಣಾಮವಂತೂ ಹೇಳತೀರದು. ಇವುಗಳ ಹಿಂದೆ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶವಿದೆಯೋ ಅಥವಾ ಯುವಕರನ್ನು ತಪ್ಪು ದಾರಿಗೆ ಕರೆದುಕೊಂಡು ಹೋಗುವ ಉದ್ದೇಶವಿದೆಯೋ ತಿಳಿಯದು.

ಎಷ್ಟೋಬಾರಿ ಮನೆಯಲ್ಲಿ ಕುಟುಂಬದ ಎಲ್ಲರೂ ಕುಳಿತು ಟಿವಿ ನೋಡುವ ಸಂದರ್ಭದಲ್ಲಿ ಮಕ್ಕಳು ಜಾಹೀರಾತನ್ನು ನೋಡುತ್ತ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಉತ್ಪನ್ನಗಳು ಯಾವುದೇ ಇರಲಿ ಎಲ್ಲ ಜಾಹೀರಾತುಗಳಲ್ಲಿ ತುಂಡು ಬಟ್ಟೆ ತೊಟ್ಟ ಹುಡುಗಿಯಂತೂ ಕಾಣಸಿಗುತ್ತಾಳೆ. ಆ ಜಾಹೀರಾತು ಗಡ್ಡ ತೆಗೆಯುವ ಬ್ಲೇಡಿರಬಹುದು, ಅಥವಾ ಇನ್ಯಾವುದೋ ಇರಬಹುದು. ಆದರೆ ಎಲ್ಲದರಲ್ಲೂ ಇವರು ಇರಲೇಬೇಕು. ವಸ್ತುವಿಗೆ ಹುಡುಗಿಯರಿಗೆ ಸಂಬಂಧವಿಲ್ಲದಿದ್ದರೂ ತೋರಿಸುವುದು ಮಾತ್ರ ಅವರನ್ನೇ.

ಅದೇ ರೀತಿ ಸಿನಿಮಾ ತಾರೆಯರು, ಕ್ರಿಕೆಟ್ ಆಟಗಾರರು ತಮ್ಮ ವೃತ್ತಿಗಿಂತ ಹೆಚ್ಚಿನ ಸಂಪಾದನೆ ಈ ಜಾಹೀರಾತುಗಳ ಮುಖಾಂತರ ಮಾಡುತ್ತಿದ್ದಾರೆ. ಈ ನಾಯಕರನ್ನೇ ಜೀವನದ ಆದರ್ಶ ಎಂದು ನಂಬಿರುವ ಅನೇಕ ಯುವಕ-ಯುವತಿಯರು ಅವರು ಬಳಸುವ ಸಾಬೂನು, ಬಟ್ಟೆ, ಬೈಕ್ ಹೀಗೆ...... ಅಂತೂ ಅವರ ಅನುಕರಣೆ ಮಾಡಿಯೇ ಮಾಡುತ್ತಾರೆ. ಈ ಉದ್ದೇಶದಿಂದಲೇ ಇವರನ್ನು ಜಾಹಿರಾತುಗಳಲ್ಲಿ ತೋರಿಸಲಾಗುತ್ತದೆ. ಹೀಗೆ ಜನರಿಗೆ ಎಷ್ಟು ಮೋಸ ಮಾಡಲು ಸಾಧ್ಯ ಅಷ್ಟು ಮೋಸದ ಜಾಲವನ್ನು ಲೀಲಾಜಾಲವಾಗಿ ಬೀಸುತ್ತಾರೆ.


ಹಾಗಾದರೆ ಜಾಹೀರತು ಬೇಡವೆ? ಖಂಡಿತಾ ಬೇಕು. ಆದರೆ ತೋರಿಸುವ ವಿಧಾನವನ್ನು ಸರಿಪಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಮತ್ತು ಯಾವುದನ್ನು ತೋರಿಸಬೇಕು ಯಾವುದನ್ನು ತೋರಿಸಬಾರದು ಎನ್ನುವುದರ ಅರಿವೂ ಬೇಕಾಗುತ್ತದೆ. ಜಾಹೀರಾತಿನಿಂದ ಉತ್ನಗಳ ಮಾರಾಟವಾಗಬೇಕೆ ಹೊರತು ಅದರಿಂದ ಯುವಜನರಿಗೆ, ಮಕ್ಕಳಿಗೆ ಮಾರಕವಾದ, ನಮ್ಮ ಸಂಸ್ಕೃತಿಗೆ ಬೇಡವಾದ ಸಂದೇಶವಂತೂ ಹೋಗಬಾರದೆನ್ನುವುದೇ ಉದ್ದೇಶ.

2 comments:

ಶ್ವೇತ said...

haudu indina jaahirathugaLalli 'vastu vishaya'kkinta maimaaTakke jaasti ottu kodtidare...

ಅನು said...

ವಾಸ್ತವ ಸಂಗತಿ. ಜಾಹೀರಾತುಗಳಿಗೆ ಸಂಬಂಧವಿಲ್ಲದಿದ್ದರೂ ಹುಡುಗಿಯರನ್ನು ಬಳಸಿಕೊಳ್ಳುತ್ತಾರೆಯೆಂಬುದು ನೂರಕ್ಕೆ ನೂರು ಸತ್ಯ. ಎಷ್ಟೂಂದ್ರೆ ಒಂದು ಸಿಮೆಂಟ್ ಜಾಹೀರಾತಿಗೂ ಒಬ್ಬ ತುಂಡುಬಟ್ಟೆ ತೊಟ್ಟ ಹುಡುಗಿಯನ್ನು ಬಳಸಿಕೊಂಡಿರೋದನ್ನ ಕಾಣ್ಬಹುದು. ಯಾವುದೋ ಭ್ರಮೆಗೊಳಗಾಗಿ ಈ ರೀತಿ ನಡೆದುಕೊಳ್ಳುತ್ತಾರೇನೊ...