Sunday, January 10, 2010

ತಪ್ಪು ಮೊದಲು, ಸರಿ ಮತ್ತೆ.....!!!!

ಇದೇನು ತಪ್ಪು ಮೊದಲು, ಸರಿ ಮತ್ತೆ!! ಎನ್ನುವ ವಿಚಿತ್ರವಾದ ವಾದವನ್ನು ಮುಂದಿಡುತ್ತಿದ್ದೇನೆ ಎಂದು ಅಂದುಕೊಳ್ಳುತ್ತಿದ್ದೀರಾ? ಹೌದು ಇದೊಂದು ಮನುಷ್ಯ ಸಹಜ ಗುಣ. ಗುಣ ಎಲ್ಲರಲ್ಲೂ ಇದ್ದೇ ಇದೆ. ಅಂದರೆ ನಾವು ಸಹಜವಾಗಿ ಬೇರೊಬ್ಬರಲ್ಲಿ ಮೊದಲಿಗೆ ತಪ್ಪನ್ನು ಹುಡುಕುತ್ತೇವೆ.

ಉದಾಹರಣೆಗೆ ಒಂದು ಘಟನೆಯನ್ನು ಅವಲೋಕಿಸಿ:
ಇಬ್ಬರು ಸ್ನೇಹಿತರಿದ್ದರು. ಇಬ್ಬರೂ ಆತ್ಮೀಯ ಸ್ನೇಹಿತರು. ಎಲ್ಲ ವಿಚಾರಗಳನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಳ್ಳುತ್ತಿದ್ದರು. ಒಬ್ಬ ಸ್ನೇಹಿತ ಒಂದು ನಾಯಿಯನ್ನು ಸಾಕಿದ್ದನು. ಅವನಿಗೆ ನಾಯಿಯ ವಿಶೇಷತೆಯನ್ನು ತನ್ನ ಸ್ನೇಹಿತನಿಗೆ ತೋರಿಸಬೇಕೆಂಬ ಮನಸ್ಸಾಯಿತು.
ಅವನನ್ನು ಒಂದು ನದೀತೀರಕ್ಕೆ ಕರೆದೊಯ್ದನು. ನಾಯಿಯ ಬಗ್ಗೆ ವಿವರಿಸುತ್ತಾ ``ನೋಡು ಮಿತ್ರಾ, ನನ್ನ ನಾಯಿಯಲ್ಲಿ ಒಂದು ವಿಶೇಷ ಗುಣ ಇದೆ, ಅದು ಏನು ಅಂತ ನೀನೇ ಹೇಳು'' ಎಂದು, ಒಂದು ಕಟ್ಟಿಗೆಯ ತುಂಡನ್ನು ನೀರಿಗೆ ಎಸೆದು ನಾಯಿಗೆ ತರಲು ಹೇಳಿದ. ನಾಯಿ ನೀರಿನ ಮೇಲೆ ಓಡುತ್ತ ಹೋಗಿ ಕಟ್ಟಿಗೆಯ ತುಂಡನ್ನು ತಂದಿತು. ಆತ ಸ್ನೇಹಿತನಿಗೆ ಕೇಳಿದ, ``ಏನಾದರು ವಿಶೇಷ ಗುಣ ಗೊತ್ತಾಯ್ತಾ?'' ಎಂದು. ಸ್ನೇಹಿತನಿಗೆ ಗೊತ್ತಾಗಲಿಲ್ಲ. ಹಾಗಾದರೆ ಇನ್ನೊಮ್ಮೆ ನೋಡು ಎಂದು ಮತ್ತೆ ಹಾಗೇ ಮಾಡಿದ, ಆಗಲೂ ಮಿತ್ರನಿಗೆ ಗೊತ್ತಾಗಲಿಲ್ಲ. ``ಛೆ! ಗೊತ್ತಾಗಲಿಲ್ವೆ? ಇನ್ನೊಮ್ಮೆ ಗಮನವಿಟ್ಟು ನೋಡು ಎಂದು ಮೊದಲಿನ ಹಾಗೆ ನೀರಲ್ಲಿ ಕಟ್ಟಿಗೆ ಎಸೆದ, ಮತ್ತೆ ನಾಯಿ ನೀರಿನ ಮೇಲೆ ಓಡಿ ಕಟ್ಟಿಗೆಯ ತುಂಡನ್ನು ತಂದಿತು. ಮತ್ತೆ ಕೇಳಿದಾಗ ಮಿತ್ರ ಹೇಳಿದ ``ಹಾಂ! ಗೊತ್ತಾಯ್ತು ನಿನ್ನ ನಾಯಿಗೆ ನೀರಿನಲ್ಲಿ ಈಜಲು ಬರುವುದಿಲ್ಲ.'' ಎಂದ. ವಾಸ್ತವವಾಗಿ ಅದು ನೀರಿನ ಮೇಲೆ 'ಓಡುತ್ತದೆ' ಎಂಬುದು ಅದರ ಒಂದು ವಿಶೇಷತೆಯಾಗಿತ್ತು. ಅಂಥ ವೇಗವಿತ್ತು ಅದರಲ್ಲಿ. ಆದರೆ ಆತನಿಗೆ ಇದು ತಿಳಿಯದೇ ಹೋಯಿತು. ಅದರಲ್ಲಿದ್ದ ನ್ಯೂನತೆಯೇ ಕಂಡಿತು!

ನಮ್ಮ ಜೀವನದಲ್ಲಿ ಇನ್ನೊಬ್ಬರ ಒಳ್ಳೆಯ ಗುಣವನ್ನು ಗುರುತಿಸುವ ಸ್ವಭಾವವನ್ನು ಅಳವಡಿಸಿಕೊಂಡಾಗ ಜಗತ್ತೇ ನಮಗೆ ಒಳ್ಳೆಯದಾಗಿ ಕಾಣುತ್ತದೆ. ಆದರೆ ನಾವು ಪ್ರಯತ್ನದತ್ತ ಸಾಗುತ್ತಿಲ್ಲ. ಇಂದಿನ ಟಿ.ವಿ. ಸುದ್ದಿವಾಹಿನಿಗಳಲ್ಲಿ, ಹಾಗೆಯೇ ಸಂಜೆ ಪತ್ರಿಕೆಗಳಲ್ಲಿ ಒಳ್ಳೆಯ ವಿಷಯಗಳು ಬಹಳ ಕಡಿಮೆ ನೋಡಲು ಸಿಗುತ್ತವೆ. ಕೇವಲ ಜನರ ತಪ್ಪುಗಳು, ವ್ಯಕ್ತಿಯ ತಪ್ಪುಗಳು. ಹೀಗೆ ಅಂತೂ ತಮ್ಮ ತಪ್ಪು ಗೊತ್ತಾಗದಿದ್ದರೂ ಇನ್ನೊಬ್ಬರ ತಪ್ಪನ್ನು ಏನೋ ದೊಡ್ಡ ಸಾಧನೆ ಮಾಡಿದವರ ಹಾಗೆ ಹೇಳಿಕೊಳ್ಳುವುದರಲ್ಲಿ ಸಂತೋಷಪಡುವ ಅನೇಕರು ಇಂದು ಕಾಣಸಿಗುತ್ತಾರೆ.

ಒಟ್ಟಾರೆ ಹೇಳುವುದಾದರೆ ಒಳ್ಳೆಯತನ ಎಲ್ಲರಲ್ಲೂ ಇದ್ದೇ ಇರುತ್ತದೆ. ಹಾಗೇ ಕೆಟ್ಟದ್ದೂ ಇರುತ್ತದೆ. ಆದರೆ ನಾವು ಗುರುತಿಸುವಾಗ ಒಳ್ಳೆಯದನ್ನು ಮೊದಲು ಗುರುತಿಸೋಣ. ಮತ್ತೆ ನಿಧಾನಕ್ಕೆ ಅವರಲ್ಲಿನ ತಪ್ಪುಗಳನ್ನು ತಿಳಿಹೇಳಿ, ನಮ್ಮಿಂದಾದಷ್ಟು ಸರಿಪಡಿಸಲು ಪ್ರಯತ್ನಿಸೋಣ. ತಿದ್ದಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟದ್ದು.

5 comments:

ಜಲನಯನ said...

ಸುನಿಲ್ ನಿಜಕ್ಕೂ ಇದೊಂದು ಒಳ್ಳೆಯ ಕಿವಿಮಾತು ಎಲ್ಲರಿಗೂ ಹಾಗೇ ತಂದೆ ತಾಯಿಗೂ...ಏಕೆಂದರೆ ಮಕ್ಕಳಲ್ಲಿನ ದುರ್ಗುಣಗಳನ್ನು ಎತ್ತಿ ಹೇಳಿ ಹಿಯಾಳಿಸುವುದು ಮಕ್ಕಳಲ್ಲಿ ಕೀಳರಿಮೆ ಬ್ಭಾವನೆಯನ್ನು ಹುಟ್ಟುಹಾಕಿ ಉದ್ಧಟತನಕ್ಕೆ ದಾರಿ ಮಾದಬಹುದು...ಅದೇ...ಅವರ್ಲ್ಲಿನ ಒಳ್ಲೆಯದನ್ನು ಹೊಗಳಿ..ಮೆತ್ತಗೆ ಇದನ್ನು ಸ್ವಲ್ಪ ಮಾಡಿಕೋ ನಿನಗಿಂತ ಉತ್ತಮ ಇನ್ನೊಬ್ಬರು ಇಅರಲಾರರ್ರು ಎಂದರೆ...???!! ಹೌದು...ನಿಮ್ಮ ಮಾತು....ದಿಟ.

ಸುನೀಲ್ ಕುಲಕರ್ಣಿ, ಮಂಗಳೂರು said...

Dhanyawad sir. nimma salaheyannu apEkshisuttEne.

Ganesh Bhat said...

ನನಗೆ ವಿಶ್ವಾಸವಿದೆ, ಜನರು ಇದರಿಂದ ಪ್ರೇರಿತರಾಗುತ್ತಾರೆ. ಏಕೆಂದರೆ ಎಲ್ಲರಲ್ಲೂ ಒಳ್ಳೆಯತನ ಇದೆ. ಅವರ ಒಳ್ಳೆಯತನವನ್ನು ಸರಿಯಾದ ಕೆಲಸಕ್ಕೆ ವಿನಿಯೋಗಿಸುವದಷ್ಟೇ ಮುಖ್ಯ. ಒಳ್ಳೆ ಲೇಖನ !!!!!!! ಮನಮುಟ್ಟುವಂತಿದೆ..

ಅನು said...

ಒಳ್ಳೆ ವಿಚಾರ. ತಪ್ಪನ್ನು ನೋಡ್ತಾ ಹೋದ್ರೆ ಪ್ರೀತಿ-ವಿಶ್ವಾಸ ಮೂಡೋದಕ್ಕೆ ಸಾಧ್ಯ ಇಲ್ಲ ಅಲ್ವಾ..?

Venkataraghavan said...

so ನಾವು ಗುಣಗ್ರಾಹಿಗಳಾಗಿರಬೇಕು ಅಲ್ವಾ ಸುನಿಲ್ ಜಿ...