Saturday, June 26, 2010

ಯಾಂತ್ರಿಕತೆಯತ್ತ ಸಾಗುತ್ತಿದೆ ನಮ್ಮ ಬದುಕು......

ನಮ್ಮ ಬದುಕು ಇಂದು ಯಾಂತ್ರಿಕತೆಯೆಂಬ ಮಾಂತ್ರಿಕನ ಕೈಯಲ್ಲಿ ಸಿಕ್ಕು ಹೊರಗೆ ಬಾರದ ಸ್ಥಿತಿಗೆ ತಲುಪಿದೆ. ಇದರ ಪರಿಣಾಮವಾಗಿ ನಾವೆಲ್ಲರೂ ಅಗ್ಗದ ಬದುಕಿಗೆ ಶರಣಾಗಿದ್ದೇವೆ. ಎಲ್ಲ ವಿಚಾರಗಳಲ್ಲಿ ಶ್ರಮವಿಲ್ಲದೇ ಕೆಲಸವಾಗಬೇಕೆನ್ನುವ ಮಾನಸಿಕತೆಯನ್ನು ಬೆಳಿಸಿಕೊಳ್ಳುತ್ತಿದ್ದೇವೆ. ಈ ಮಾನಸಿಕತೆ ಹಳ್ಳಿಪ್ರದೇಶದ ಜನರನ್ನು ಬಿಟ್ಟಿಲ್ಲ. ಮೊದಲು ಹಳ್ಳಿಗಳಿಗೆ ವಾಹನದ ವ್ಯವಸ್ಥೆ ಇಲ್ಲದಿರುವಾಗ ನಡೆದುಕೊಂಡು ಹೋಗುವ ಅಭ್ಯಾಸವಿತ್ತು. ಆದರೆ ಇಂದು ಆ ವ್ಯವಸ್ಥೆ ಬಂದ ತಕ್ಷಣ ಜನರ ಮಾನಸಿಕತೆಯೇ ಬೇರೆ ಆಗಿದೆ. ೩೦ನಿಮಿಷದಲ್ಲಿ ನಡೆದು ಹೋಗುವ ಸ್ಥಳಕ್ಕೆ ೧ ಘಂಟೆ ಕಾದು ಹಣಕೊಟ್ಟು ಹೋಗುವುದು ಇಂದು ಸಾಮಾನ್ಯವಾಗಿದೆ.
ಇದು ಚಿಕ್ಕಮಕ್ಕಳಿಂದಲೇ ಪ್ರಾರಂಭವಾಗುತ್ತದೆ. ಹಾಲು, ಹಣ್ಣು , ತರಕಾರಿಯಂತಹ ಸ್ವಾಭಾವಿಕವಾಗಿ ಪೌಷ್ಠಿಕತೆಯನ್ನು ನೀಡುವ ಆಹಾರಗಳನ್ನು ನೀಡದೆ, ಡಬ್ಬಗಳಲ್ಲಿ ಬರುವ ನಾನಾ ಹೆಸರಿನ (ವಿದೇಶಿಯವಾಗಿದ್ದರೆ ಇನ್ನೂ ಪ್ರಾಶಸ್ತ್ಯ) ಹುಡಿಗಳನ್ನು ಮಕ್ಕಳಿಗೆ ನೀರಿನಲ್ಲಿ ಕದಡಿ ನೀಡುತ್ತಿದ್ದೇವೆ. ಕಾರಣವೇನೆಂದರೆ ಈ ಆಹಾರ ಸೇವನೆಯಿಂದ ಮಕ್ಕಳ ಹೊಟ್ಟೆಯಲ್ಲಿ ಅರಗಲು ಸುಲಭವಂತೆ. ಮಕ್ಕಳ ಹೊಟ್ಟೆಗೆ ಅರಗಿಸುವ ಶ್ರಮ ತಪ್ಪಸಬೇಕಲ್ಲವೇ? ಅದಕ್ಕಾಗಿ ಇವುಗಳ ಬಳಕೆ. ಹಾಗೆ ಇಂದು ಮಾರುಕಟ್ಟೆಯಲ್ಲಿ ಸಿದ್ಧ ಆಹಾರಿನ ವ್ಯವಸ್ಥೆಗೆ ಅನೇಕ ಗೃಹಣಿಯರು ಹೋಗುತ್ತಿದ್ದಾರೆ. ಅರ್ಧ ಅರಗಿದ ಸಿದ್ಧ ಆಹಾರದ ಬಳಕೆಯು ದಿನದಂದ ದಿನಕ್ಕೆ ಹೆಚ್ಚುತ್ತಿದೆ. ಕಾರಳ ಆಡುಗೆ ಮಾಡುವ ಸಮಯ ಉಳಿಸುವುದು, ಕಷ್ಟಪಟ್ಟು ತರಕಾರಿ ಹೆಚ್ಚುವುದು, ಒಗ್ಗರಣೆ, ನೀರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಬರುವುದು. ಈ ರೀತಿಯ ಕಷ್ಟದಿಂದ ಮುಕ್ತಿ ಪಡೆಯಲು.
ನವಿರು ನವಿರಾದ, ಆಕರ್ಷಕ ಬಟ್ಟೆಗಳನ್ನು ತೊಟ್ಟು ಉದ್ಯಾನವನಗಳಲ್ಲಿ ಗಾಳಿ ಸಂಚಾರ ಮಾಡುವವರ ಸಂಖ್ಯೆ ಹೆಚ್ಚುತ್ತಿರುವುದು ನಮ್ಮ ಗಮನಕ್ಕೆ ಬರುತ್ತಿದೆ. ಖೋ ಖೋ, ಕಬಡ್ಡಿ , ಕಾಲ್ಚೆಂಡು, ಹಾಕಿ - ಈ ರೀತಿ ಬೆವರು ಸುರಿಸಿ ಆಡುವ ಆಟಗಳ ಪ್ರಮಾಣ ದಿನೇ ದಿನೇ ಕುಂಠಿತವಾಗುತ್ತಿರುವುದು ಈ ರೀತಿಯ ಮಾನಸಿಕತೆಯಿಂದಲೇ ಅಲ್ಲವೆ? ಏಕೆಂದರೆ ಈ ಆಟಗಳೆಲ್ಲವೂ ಮೈಕೈಗೆ ಕಷ್ಟ - ನೋವು ಕೊಡುವಂಥಹವು ಹಾಗಾಗಿ ಈ ಆಟಗಳನ್ನು ನಮ್ಮ ಮಕ್ಕಳು ಆಯ್ಕೆ ಮಾಡುವುದಿಲ್ಲ ಹಾಗೂ ತಂದೆತಾಯಂದಿರೂ ಪೋತ್ಸಾಹಿಸುವುದಿಲ್ಲ. ಅದೇ ಕ್ರಿಕೇಟ್‌ಗೆ ಪೋತ್ಸಾಹವಿದೆ.
ಇನ್ನು ನಮ್ಮ ಸುಶಿಕ್ಷಿತ ಅಂದರೆ ವಿದ್ಯಾವಂತ ಜನರ ಮಾನಸಿಕತೆ ಹೇಗಾಗುತ್ತಿದೆ. ಒಂದು ಹಳ್ಳಿ ಪ್ರದೇಶದ ಬಸ್‌ನಲ್ಲಿ ೨೦ರಿಂದ ೨೫ ಜನ ಪ್ರಯಾಣಿಸುತ್ತಿದ್ದರು. ಆ ಬಸ್ ನಲ್ಲಿ ಇಬ್ಬರು ಸುಶಿಕ್ಷಿತ ಜನ ಇದ್ದರು. ಅವರ ವೇಶ ಭೂಷಣದಿಂದಲೇ ತಿಳಿಯುತ್ತಿತ್ತು. ಸೂಟು-ಬೂಟು ಧರಿಸಿದ್ದರು. ಮದ್ಯೆ ಬಸ್ ಹಾಳಾಯಿತು. ತಕ್ಷಣವೇ ಚಾಲಕ ಪ್ರಯಾಣಿಕರಿಗೆಲ್ಲ ವಿನಂತಿಸಿಕೊಂಡ ಕೆಳೆಗೆ ಇಳಿದ ಸ್ವಲ್ಪ ಬಸ್ ತಳ್ಳಿರಿ ಎಂದು. ಎಲ್ಲರೂ ಕೆಳಗೆ ಇಳಿದರು ಮತ್ತು ತಳ್ಳಲು ಪ್ರಾರಂಭಿಸಿದರು. ಆದರೆ ಈ ಇಬ್ಬರು ಮಾತ್ರ ಬಸ್ ತಳ್ಳಲು ತಪ್ಪಿಯೂ ಕೈ ಜೋಡಿಸಲೇ ಇಲ್ಲ. ಕಾರಣವೇನಂದರೆ ಉಳಿದವರಂತೆ ಮೈ ಬಗ್ಗಿಸಿ ಬಸ್ಸು ತಳ್ಳಿದ್ದರೆ, ಅವರಿಗಲ್ಲ ಅವರು ಹಾಕಿಕೊಂಡ ಬಟ್ಟೆಗೆ ಅವಮಾನವಾದಂತೆ ಆಲ್ಲವೆ? ಈ ರೀತಿಯ ದೃಷ್ಯಗಳು ನಮಗೆ ಬಹಳಷ್ಟು ಕಾಣಲು ಸಿಗುತ್ತವೆ. ಸಾಮಾನ್ಯರು ಕಷ್ಟಪಡುವುದು, ಪ್ರತಿಷ್ಠಿತರು ಕೈ ಬೀಸಿಕೊಂಡು ಹಿಂದಿನಿಂದ ಬರುವುದು. ಇಂದು ಸಮಾಜದಲ್ಲಿ ಶ್ರಮಕ್ಕಲ್ಲ ಆಲಸ್ಯಕ್ಕೆ ಪ್ರತಿಷ್ಠೆಯ ಪಟ್ಟ.
ನಾವು ಕಷ್ಟಪಡುವುದನ್ನು ಶ್ರಮ ವಹಿಸುವುದನ್ನು ಈ ಯಾಂತ್ರಿಕತೆಯಿಂದಾಗಿ ಒಂದೊಂದನ್ನೆ ಬಿಡುವತ್ತ ಸಾಗುತ್ತಿದ್ದೇವೆ. ಈ ರೀತಿ ಅನೇಕ ಸಂಗತಿಗಳಲ್ಲಿ ನಮಗೆ ಅನುಭವಕ್ಕೆ ಬರುತ್ತದೆ. ಮೊಬೈಲ್ ಫೋನಿನ ಬಳಕೆ ಇರಬಹುದು, ವಾಹನದ ಬಳಕೆ ಇರಬಹುದು ಅಂತೂ ಯಾವುದು ಅತ್ಯಂತ ಸುಲಭವೋ ಕಷ್ಟವಿಲ್ಲದೆಯೇ ಆಗುತ್ತದೆಯೋ ಅದನ್ನೆ ನಾವು ಒಪ್ಪಿಕೊಳ್ಳುತ್ತಿದ್ದೇವೆ. ಶಿಕ್ಷಣ ರಂಗವನ್ನು ಆಯ್ಕೆ ಮಾಡುವಾಗಲೂ ಮಕ್ಕಳ ಮಾನಸಿಕತೆ ಕೂಡಾ ಹೀಗೆ ಸುಲಭವಾದದ್ದನೇ ಆಯ್ದು ಕೊಳ್ಳುವುದು. ಪರಿಕ್ಷೆಯ ಪ್ರಶ್ನೆ ಪತ್ರಿಕೆ ಸರಳವಾಗಿರಲಿ, ಸರಳವಾದ ಪ್ರಶ್ನೆಗೆ ಉತ್ತರಿಸಿ ಹೆಚ್ಚು ಹೆಚ್ಚು ಅಂಕ ಬರಲಿ, ಹೀಗೆ ಕಷ್ಟಕ್ಕೆ ಕೈ ಹಾಕುವ ಪ್ರಯತ್ನವೇ ನಮ್ಮ ಸಮಾಜದಲ್ಲಿ ಕಡೆಮಾಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಹೀಗೆ ಮುಂದುವರೆ ಇದರ ಪರಿಣಾಮ ದೇಶಕ್ಕೂ ಬರುವುದಿಲ್ಲವೇ? ನಾವು ನೀವೆಲ್ಲ ಸೇರಿದರೆ ತಾನೆ ಈ ದೇಶ ಆಗೋದು. ಹಾಗಾದೆರೆ ನಮ್ಮ ಮಾನಸಿಕತೆಯ ಆಧಾರದಲ್ಲೇ ಈ ದೇಶ ನಿಂತಿರುವುದು. ಮೇಲೆ ಕುಳಿತಿರುವುದು (ದೇಶವನ್ನಾಳುವ ರಾಜಕಾರಣಿಗಳು)ನಮ್ಮ ನಿಮ್ಮಲ್ಲಿ ಯ ಒಬ್ಬರು ತಾನೆ? ಹೀಗಿರುವಾಗ ಕಷ್ಟವನ್ನು ಎದಿರಿಸುವ ಮಾನಸಿಕತೆ ನಮ್ಮಲ್ಲಿ ತಂದುಕೊಳ್ಳುವುದು ಆವಶ್ಯಕವಿದೆ. ಕೈ ಕೆಸರಾದರೆ, ಬಾಯಿ ಮೊಸರಲ್ಲವೇ ಕೈ ಕೆಸರಾಗದಿದ್ದರೆ ಅಂದರೆ ಕಷ್ಟಪಡುವ ಪ್ರವೃತ್ತಿ ನಮ್ಮ ಜನರಲ್ಲಿ ಬಾರದಿದ್ದರೆ ಬಾಯಿ ಮೊಸರು ಆಗುವುದಾದರೂ ಹೇಗೆ.

No comments: