Sunday, January 24, 2010

ಕೆಲವೇ ಗಂಟೆಗಳು ಬಾಕಿ... !!!!

ಇನ್ನು ಕೆಲವೆ ಗಂಟೆಗಳು ಬಾಕಿ ಉಳಿದಿವೆ ಗೊತ್ತಾ? ಯಾವುದಕ್ಕೆ ಅಂತಾ ಹೇಳಲೇ ಇಲ್ವಲ್ಲಾ.. ಇಂದು ಸಾಮಾನ್ಯ ಒಬ್ಬ ವ್ಯಕ್ತಿಯನ್ನು ತೆಗೆದುಕೊಂಡರೆ ಅವನ ಆಯುಷ್ಯ ೬೦ ವರ್ಷ ಅಂತ ಅಂದುಕೊಳ್ಳಬಹುದು. ಯಾಕಂದ್ರೆ ರೀತಿ ಇಂದಿನ ಪರಿಸ್ಥಿತಿ ಆಗಿದೆ. ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಈಗ ವಿಷಯಕ್ಕೆ ಬರೋಣ. ನಮ್ಮ ಬದುಕಿನ ವರ್ಷಗಳನ್ನು ಗಂಟೆಗಳಿಗೆ ಪರಿವರ್ತಿಸಿದಾಗ ನಮಗೆ ಸಿಗುವುದು ಕೇವಲ ೫೨೫೬೦೦ ಗಂಟೆಗಳು. ಲೇಖನ ಓದುವಾಗ ನಾವು ಎಷ್ಟು ಗಂಟೆಗಳನ್ನು ದಾಟಿ ಬಂದಿದ್ದೇವೆ ಅಂತ ಯೋಚಿಸಿ..

ಯಾಕಪ್ಪಾ ಈ ಗಂಟೆಯ ಲೆಕ್ಕಾಚಾರ ಅಂತಾ ಅನ್ಕೋತೀರಾ? ಹೌದು ನಮಗೆ ನಾವು ಸಾಗುವ ದೂರ ಎಷ್ಟಿದೆ ಅಂತ ಗೊತ್ತಾದರೆ, ನಮ್ಮ ಬದುಕನ್ನು ನಾವು ರೂಪಿಸುವಲ್ಲಿ ಸಹಾಯಕವಾಗಬಹುದು ಅನ್ನೋದು ನನ್ನ ನಂಬಿಕೆ. ರೇಸ್‌ನಲ್ಲಿ ಓಟದ ಗುರಿಯನ್ನು ಮೊದಲೇ ತಿಳಿಸಿದರೆ ನಮ್ಮ ವೇಗ ಎಷ್ಟಿರಬೇಕು ಎಂಬುದನ್ನು ಮೊದಲೇ ನಿಶ್ಚಯಿಸಲು ಅನುಕೂಲವಾಗುತ್ತದೆ. ಅಂದರೆ ನಾವು ಯಾವುದೇ ವಿಷಯವನ್ನೂ ದೂರದಲ್ಲಿಟ್ಟು ನೋಡಿದಾಗ ಅದು ನಮಗೆ ಅಷ್ಟೊಂದು ಮಹತ್ವದ ಸಂಗತಿ ಎಂದು ಕಾಣುವುದಿಲ್ಲ, ಅದನ್ನೆ ನಮ್ಮ ಬದುಕಿಗೆ ತಂದಾಗ ಅದರ ಮಹತ್ವವನ್ನು ನಾವು ಕಂಡುಕೊಳ್ಳುತ್ತೇವೆ. ಹಾಗೆಂದ ಮಾತ್ರಕ್ಕೆ ದುಡುಕಿ ಎಲ್ಲವನ್ನು ಒಂದೇ ದಿನದಲ್ಲಿ ಮುಗಿಸಬೇಕು ಎಂದು ಹೇಳುವುದಲ್ಲ. ಚಿಕ್ಕವರಿರುವಾಗ ಹೇಳಿದ ಕಥೆ ನೆನಿಪಿದೆಯಲ್ವಾ? ಆಮೆ ಮತ್ತು ಮೊಲದ ಕಥೆ. ಒಂದೇ ದಿನದಲ್ಲಿ ಎಲ್ಲ ಮುಗಿಸಲು ಹೋದರೆ ಹಾಗೆ ಆಗಬಹುದು.

ಹಾಗಾದರೆ ಬದುಕನ್ನು ಬದುಕುವುದು ಹೇಗೆ? ನಿಜವಾಗಿ ನಾವೆಲ್ಲ ಪುಣ್ಯವಂತರು ಯಾಕೆಂದರೆ ಮನುಷ್ಯರಾಗಿ ಹುಟ್ಟಿದ್ದೇವೆ. ಪ್ರಾಣಿಗಳಾಗಿ ಹುಟ್ಟಿದ್ದರೆ ನಮ್ಮ ಕಥೆ ಏನಾಗುತ್ತಿತ್ತೋ ಏನೋ? ಹಾಗಿರುವಾಗ ಸಿಕ್ಕ ಈ ಅಮೂಲ್ಯ ಗಂಟೆಗಳನ್ನು ನಾವು ವ್ಯರ್ಥಮಾಡುವುದು ಸರಿಯೇ? ನಮ್ಮನ್ನು ಒಳ್ಳೆಯ ಕೆಲಸಕ್ಕೆಂದೇ ಈ ಭೂಮಿಯ ಮೇಲೆ ಕಳಿಸಿರುವಾಗ ಅದನ್ನು ಸಾರ್ಥಕಗೊಳಿಸದೆ ಹೋದರೆ ಸರಿಯೆ? ಹಾಗಾದರೆ ಬದುಕಿನ ಸಾರ್ಥಕತೆ ಹೇಗೆ? ನಮ್ಮ ಜೀವನದಲ್ಲಿ ತೊಳಲಾಟಗಳು ತುಂಬಾ ಎದ್ದು ಕಾಣುತ್ತವೆ. ಸಾಸಿವೆಯಷ್ಟು ಸುಖಕ್ಕಾಗಿ ಸಾಗರದಷ್ಟು ನೋವು ನಾವು ಅನುಭವಿಸುತ್ತೇವೆ.

ಮನಸ್ಸು ಆನಂದಮಯವಾಗಿರಬೇಕು. ಆಗ ಬದುಕಿನ ಸಾರ್ಥಕತೆ ತನ್ನಿಂದ ತಾನಾಗಿಯೇ ಬರುತ್ತದೆ. ಈ ಆನಂದ ಬರುವುದು ದುಖಃವನ್ನು ಬೆನ್ನತ್ತಿ ಹೋದಾಗ ಅಲ್ಲ, ಇರುವುದರಲ್ಲಿ ತೃಪ್ತಿ ಹೊಂದುವುದರಿಂದ.

ಒಂದು ಘಟನೆ: ಜೈಲಿನಲ್ಲಿ ಇಬ್ಬರು ಖೈದಿಗಳು ತಪ್ಪಿಸಲು ಹೊರಟರು. ಗೋಡೆ ತುಂಬಾ ಎತ್ತರ ಇತ್ತು. ಅಂತೂ ಏನೋ ಹರ ಸಾಹಸ ಮಾಡಿ ಗೋಡೆ ಹತ್ತಿದರು. ಹತ್ತಿದ ನಂತರ ಒಬ್ಬ ಖೈದಿ ಕೆಳಗೆ ನೋಡಿದ ಅಲ್ಲಿ ಕೆಸರು, ಕಸಕಡ್ಡಿ ಇತ್ತು. ಇನ್ನೊಬ್ಬ ಖೈದಿ ಮೇಲೆ ನೋಡಿದ ಅವನಿಗೆ ನಕ್ಷತ್ರಗಳಿಂದ ಮಿನುಗುತ್ತಿರುವ ಆಕಾಶ ಕಂಡಿತು, ಚಂದ್ರನ ಹೊಳೆಯುವ ಬೆಳಕು ಕಂಡಿತು. ಕೆಳಗೆ ನೋಡಿದಾತ ಜಗತ್ತನ್ನು ಕೆಸರಿಗೆ ಹೋಲಿಸಿಕೊಂಡು ಮರಳಿ ಜೈಲೇ ವಾಸಿ ಎಂದುಕೊಂಡು ಜೈಲಿಗೆ ಹೋದರೆ, ಜಗತ್ತು ಇಷ್ಟು ಸಂದರವಾಗಿದೆಯೇ ಎಂದು ಅಂದುಕೊಂಡು ಬದುಕಲು ಹೊರಟ ಇನ್ನೊಬ್ಬ ಖೈದಿ.

ಈ ಉದಾಹರಣೆಯಲ್ಲಿ ನಾವು ಕಂಡಂತೆ ನಮ್ಮ ಬದುಕು ಅಲ್ವೇ? ಹಾಗಾದರೆ ನಾವು ಈ ಬದುಕಿನ ಪ್ರತಿ ಹಂತದಲ್ಲೂ ಆನಂದವನ್ನು ಹುಡುಕುವ ಪ್ರಯತ್ನ ಮಾಡುವುದು ಒಳ್ಳೆಯದಲ್ಲವೇ? ಪ್ರತಿ ವಸ್ತುವಿನಲ್ಲಿ ಆನಂದವನ್ನು ಭಗವಂತ ತುಂಬಿದ್ದಾನೆ. ಅದನ್ನು ನಾವು ಕಂಡುಕೊಳ್ಳಬೇಕು. ಇರುವವರಗೆ ಜೀವನವನ್ನು ಆನಂದಿಸಬೇಕು, ಹೋದ ನಂತರದ ವಿಷಯ ಬೇಡ. ಯಾವುದು ಇಲ್ಲವೋ ಅದರ ಬಗ್ಗೆ ಯೋಚಿಸುತ್ತಾ ಸಮಯ ವ್ಯರ್ಥಮಾಡುತ್ತೇವೆ. ಆಗ ನಮ್ಮ ಜೀವನದ ಅನೇಕ ಗಂಟೆಗಳು ಸವೆಯುತ್ತಾ ಸಾಗುತ್ತವೆ. ಒಮ್ಮೆ ಯೋಚಿಸಿ, ನಾವು ಕಳೆದ ಒಂದು ಕ್ಷಣವೂ ನಮ್ಮ ಜೀವನದಲ್ಲಿ ಎಂದೂ ಮರಳಿ ಬರುವುದಿಲ್ಲಜೀವನದಲ್ಲಿ ಯಾವುದನ್ನೂ ಅತೀ ಪರೀಕ್ಷಿಸಬಾರದು ಹಾಗೆ ಮಾಡಿದಾಗ ಅದರಲ್ಲಿ ನಮಗೆ ತಪ್ಪು ಕಾಣುತ್ತದೆ. live it as it is.

ಹೀಗಿರುವಾಗ ಯಾಕೆ ಇಲ್ಲದರ ಬಗ್ಗೆ ಯೋಚಿಸಿ, ಬದುಕನ್ನು ಸವೆಸುವುದರಲ್ಲಿ ಮಗ್ನರಾಗಿದ್ದೇವೆ. ಇದರೊಂದಿಗೆ ಇನ್ನೊಂದು ಅಂಶವನ್ನು ನಮ್ಮ ಬದುಕಿನಲ್ಲಿ ನಾವು ಅಳವಡಿಸಕೊಂಡರೆ ಇನ್ನೂ ಆನಂದಮಯವಾಗುತ್ತದೆ ಈ ನಮ್ಮ ಬದುಕು. ನಾಲ್ಕು ಜನರಿಗೆ ಸಮರ್ಪಿತ ಜೀವನ ನಮ್ಮದಾಗಬೇಕು. ಇನ್ನೊಬ್ಬರ ಸಂತೋಷದಲ್ಲಿ ನಮ್ಮ ಸಂತೋಷವನ್ನು ಕಂಡಾಗ ನಿಜವಾಗಿ ಈ ಜೀವನ ಆನಂದಮಯ ಆಗುತ್ತದೆ.

ಬದುಕಿನ ಪ್ರತೀ ದಿನವೂ ನನ್ನ ಕೊನೆಯ ದಿನವೆಂದು ಅಂದುಕೊಂಡರೆ, ನಮ್ಮ ಗುರಿ ಇನ್ನು ಹತ್ತಿರವಲ್ಲವೇ? ಗುರಿ ಮುಟ್ಟಲು ಅಂತರ ತುಂಬ ಇರಬಹುದು, ಆದರೆ ಆ ಅಂತರವನ್ನು ಕ್ರಮಿಸುವ ಮಧ್ಯೆ ಇರುವ ಬದುಕನ್ನು ಹೇಗೆ ಬಾಳುತ್ತೇವೆ ಎಂಬುದೇ ಬದುಕಿನ ಮಹತ್ವ.

ಬರದಿರುವುದರ ಎಣಿಕೆಯಲಿ, ಬಂದಿರುವುದರ ಮರೆಯದಿರು
ಗುರುತಿಸು ಒಳ್ಳೆಯದನು ಕೆಡುಕುಗಳ ಮಧ್ಯೆ |
ಬಂದ ಭಾಗ್ಯವ ನೆನೆ ಬಾರದೆನ್ನುವುದ ಬಿಡು
ಹರುಷಕದೆ ದಾರಿ ಮಂಕುತಿಮ್ಮ ||
ಈ ಸಾಲುಗಳು ನಮ್ಮ ಜೀವನಕ್ಕೂ ಅನ್ವಯವಾಗಬಾರದೇಕೆ?

1 comment:

Ganesh Bhat said...

ಆದಿ ಶಂಕರಾಚಾರ್ಯರು ಹೇಳುತ್ತಾರೆ. " ಪುನರಪಿ ಜನನಂ, ಪುನರಪಿ ಮರಣಂ, ಪುನರಪಿ ಜನನಿ ಜಠರೆ ಶಯನಂ" ಎಂದು. " ಬದುಕು ಮಾಯೆಯ ಆಟ, ಕಾಡುವುದು ವಿಧಿಯಾಟ " " ಈ ಜೀವನವೆ ನಾಟಕ ರಂಗ " ಎಂದು ನಮ್ಮ ಕವಿಗಳು ಹೇಳುತ್ತಾರೆ. " ಬದುಕು ಎಂಬುದು ನಮಗೆ ಸಿಕ್ಕಿರುವ ಅತ್ಯಧ್ಬುತ ಉಡುಗೊರೆ" ಅದನ್ನು ಸುಂದರವಾಗಿಸಿಕೊಳ್ಳುವುದು ನಮ್ಮ ಕೈಲಿದೆ. ಮತ್ತೊಂದು ಜನ್ಮ ಇದೆಯೋ ಇಲ್ಲವೊ ಗೊತ್ತಿಲ್ಲ. ಇರುವ ಜನ್ಮವನ್ನು ಈ ಹೃದಯ ತನ್ನ ಕೊನೆಯ ಬಡಿತವನ್ನು ನಿಲ್ಲಿಸುವವರೆಗೂ ಜೀವಿಸಿರುವುದೇ ಬದುಕು... ಬದುಕಿನ ಉದ್ದೇಶ ಬದುಕುವುದು ! ಹೇಗೆ ಬದುಕಬೇಕು ಅನ್ನೋದನ್ನ ಆಯಾ ವ್ಯಕ್ತಿಗಳೇ ಆಯ್ಕೆ ಮಾಡಿಕೊಳ್ಳಬೇಕು ಆಲ್ವಾ ಅಣ್ಣಾ ????????